15/09/2004
ಇಂದು ಮುಂಜಾನೆಯಿಂದ ಏನೋ ಒಂದು ತರಹದ ತಳಮಳ,ಉತ್ಸಾಹ.ಕಾಲೇಜ್ ಅಡ್ಮಿಶನ್ ಮಾಡಿಸಲು ಉಡುಪಿಯಿಂದ ಮೈಸೂರಿಗೆ ಬಂದಿದ್ದೆ.ಆದರೆ ನನ್ನ ಇಂದಿನ ಈ ಉತ್ಸಾಹಕ್ಕೆ ಕಾರಣ,ಇಂದು ನಾನು ಮಾಡಬೇಕಿದ್ದ ಒಂದು ಅಪರೂಪದ ಭೇಟಿ. ನನ್ನ ಕಳೆದ ಹತ್ತು ವರ್ಷಗಳ ಕನಸು ನನಸಾಗುವ ದಿನ ಕಡೆಗೂ ನನ್ನ ಮುಂದಿತ್ತು. ಜೆ.ಸಿ.ಇ.ಯಲ್ಲಿ ನನ್ನ ಕೆಲಸಗಳು ಮುಗಿದ ನಂತರ ,ಮನೆಯ ವಿಳಾಸ ನೀಡಿ ಆಟೋ ಹತ್ತಿದೆ.ಆಟೋ ದಟ್ಟವಾದ ಕಪ್ಪಗಿನ ಹೊಗೆ ಕಾರುತ್ತಾ ಚಲಿಸಲು ಶುರುವಾಯಿತು. ಆದರೆ ಅದಕ್ಕಿಂತ ವೇಗವಾಗಿ ನನ್ನ ಮನಸು.
ನಾನು ಕಣ್ಣು ತೆರೆದ ಕ್ಷಣದಿಂದ ನನ್ನ ಜೊತೆ ಇದ್ದು, ನಂತರ ಈ ಜಗತ್ತನ್ನು ಅರಿಯುವ ಮೊದಲೇ ಅನಿವಾರ್ಯ ಕಾರಣಗಳಿಂದ ನನ್ನಿಂದ ದೂರಾದ ನನ್ನ ಬಾಲ್ಯದ ಗೆಳತಿ, ನೆನಪಿನ ಅಂಗಳದಲ್ಲಿ ಎಂದು ಬಾಡದ ಹೂವಿನಂತಿರುವ 'ಸ್ನೇಹ'. ಇವಳು ನನ್ನ ಸಹಪಾಟಿಯೂ ಹೌದು; ಪ್ರತಿ ಸ್ಪರ್ಧಿಯೂ ಹೌದು. ಒಂದೇ ವಠಾರದಲ್ಲಿ ಇದ್ದುದರಿಂದ ನಾವು ಜೊತೆಯಾಗಿರುವುದಕ್ಕಿಂತ ಜಗಳವಾಡಿದ್ದೇ ಹೆಚ್ಚು.ಆದರೆ ನಮ್ಮ ಗೆಳೆತನ ನಮಗೆ ಅರಿವಿಲ್ಲದಂತೆ ಎಲ್ಲ ಸೀಮೆಗಳನ್ನು ಮೀರಿ ಬೆಳೆದು ನಿಂತಿತ್ತು. ಈಗ ಹತ್ತು ವರ್ಷಗಳ ನಂತರ ಮತ್ತೆ ನಮ್ಮಿಬ್ಬರ ಮಿಲನ.
ಬಾಲ್ಯದ ಆ ದಿನಗಳು ಬಹುಶಃ ನನ್ನ ಜೀವನದ ಸುವರ್ಣ ಕ್ಷಣಗಳು. ನಮ್ಮಿಬ್ಬರ ಆಟದಲ್ಲಿ ಯಾವಾಗಲೂ ನಾನು ಮೋಸ ಮಾಡುತ್ತಿದ್ದೆ. ಆದರೂ ಸೋಲುತ್ತಿದ್ದೆ. ಒಮ್ಮೆ ನನ್ನ ಮೋಸವನ್ನು ಅರಿತು, ಕೋಪದಿಂದ ಬಂದು ನನಗೆ ಹೊಡೆದಿದ್ದಳು. ನಾನು ಅಳಲಿಲ್ಲ; ಆದರೆ ಅವಳ ಕಣ್ಣಲ್ಲಿ ನೀರಿತ್ತು. ಆ ಗಾಯದ ಗುರುತನ್ನು ನೋಡಿಕೊಂಡೆ. ಕಲೆ ಇನ್ನೂ ಹಸಿರಾಗಿಯೇ ಇದ್ದಂತ್ತಿತ್ತು. ನನ್ನ ಮದುರ ನೆನಪು ಕೂಡ.
ಅವಳ ಪರಿವಾರವನ್ನು ಬೀಳ್ಕೊಡುವ ದಿನ ನಮ್ಮ ಮನೆಯಲ್ಲಿ ಒಂದು ಚಿಕ್ಕ ಪಾರ್ಟಿ ಇತ್ತು. ನಾವು ಇಬ್ಬರು ಜೊತೆಯಾಗಿ ಕಳೆಯುವ ನಮ್ಮ ಬಾಲ್ಯದ ಕಡೆಯ ದಿನ ಎಂಬ ಅರಿವು ಇಲ್ಲದೆ, ದಿನ ಪೂರ್ತಿ ಆಡಿದೆವು, ನಲಿದೆವು.ನಂತರ ಸಂಜೆ ವಿಷಯ ತಿಳಿದಾಗ ಅವಳಿಗೆ ವಿದಾಯ ಹೇಳಲು ಧೈರ್ಯವಿಲ್ಲದೆ, ಎದುರು ನಿಂತಿರುವ ಸಿಚುಏಷನ್ ಎದುರಿಸಲಾಗದೆ ಹೇಡಿಯಂತೆ ಅಟ್ಟದ ಮೇಲೆ ಕುಳಿತಿದ್ದೆ. ನಂತರ ಧೈರ್ಯ ಮಾಡಿಕೊಂಡು ಅವಳಿಗೆ ಟಾಟಾ ಹೇಳಲು ಬಂದಾಗ ಸಮಯ ಮಿಂಚಿತ್ತು. ಜೀವನ ನನ್ನನ್ನು ಅಲ್ಲೆ ಬಿಟ್ಟು ತನ್ನ ದಾರಿ ಬದಲಿಸಿತ್ತು.
ಬಹುಶಃ ಜೀವನದಲ್ಲಿ ಮೊದಲ ಬಾರಿ ಒಂದು ತರಹದ ಇನ್ಸೆಕ್ಯೂರ್ ೞೀಲಿಮ್ಗ್ ಬಂದಿತ್ತು. ಜೀವನದ ಕಡೆಯವರೆಗೂ ನಾನು, ಸ್ನೇಹ, ಬಾಲ್ಯ, ಆಟ, ಗೆಳೆತನ ಎಲ್ಲ ಹಾಗೆ ಇರುತ್ತೆ ಎಂದು ಯೋಚಿಸುವಷ್ಟು ಮುಗ್ಧತೆ (ಬಹುಶಃ) ಇಬ್ಬರಲ್ಲಿಯೂ ಇತ್ತು. ಸ್ನೇಹ ಒಂದು ದಿನ ದೂರವಾಗುತ್ತಾಳೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಆ ವಿದಾಯದ ದಿನ, ಎಲ್ಲರೂ ಎಣಿಸಿದ್ದಕ್ಕಿಂತಲೂ ಬೇಗ ಬಂದಿತ್ತು. ಸಮಯ ಎಲ್ಲವನ್ನು ಮರೆಸುತ್ತದೆ. ಸಮಯದೊಂದಿಗೆ ನಾನು ಅವಳನ್ನು ಮರೆತೆ, ಇಲ್ಲ ಮರೆಯಲು ಪ್ರಯತ್ನಪಟ್ಟೆ.ಇದರಲ್ಲಿ ನಾನು ಎಷ್ಟು ಸಫಲನಾದೆ ಎಂಬುದು ಮಾತ್ರ ಇಂದಿಗೂ ನಿಗೂಧ.
ನಾನು, ಸ್ನೇಹ, ನಮ್ಮ ಬಾಲ್ಯ. ಆದರೆ ಈಗ ಸಂದರ್ಭ ಬದಲಾಗಿದೆ. ನಮ್ಮಿಬ್ಬರ ಬಾಲ್ಯ ಮುಗಿದು, ನಮ್ಮ ಆತ್ಮೀಯತೆಗೆ ಆಧಾರವಾಗಿದ್ದ ಮುಗ್ಧತೆ ನಶಿಸಿಹೋಗಿತ್ತು. ನನ್ನ ಕಂಡ ಕೂಡಲೆ ಅವಳ ಪ್ರತಿಕ್ರಿಯೆ ಹೇಗಿರಬಹುದು? ಸಮ್ತೋಷದಿಂದ ಚೀರಿ ಚಿಕ್ಕಂದಿನ ಸ್ಟೈಲ್ನಲ್ಲಿ ನನ್ನ ಕೈ ಹಿಡಿದು ಮನೆಯೊಳಗೆ ಎಳೆದುಕೊಂಡು ಹೋಗಬಹುದೆ? ಅಥವಾ ಬಾಗಿಲನ್ನು ತೆರೆದು ಬಾಗಿಲ ಸಂಧಿಯಲ್ಲಿ ಲಜ್ಜೆಯಿಂದ ಮರೆಯಾಗಬಹುದೆ? ಅಥವಾ ದೇವದಾಸನನ್ನು ಕಂಡ ಪಾರೂ ಹಾಗೆ ಮಹಡಿಯಲ್ಲಿ ಅವಿತುಕೊಳ್ಳಬಹುದೆ? ದೇವರೆ, ಈ ಓಡುವ ಮನಸ್ಸಿಗೆ ಲಗಾಮಿಲ್ಲವೆ? ನಾನು ನಕ್ಕೆ, ಮನಸ್ಸು ನಕ್ಕಿತು.
ಆಟೋ ಮುಖ್ಯ ರಸ್ತೆಯನ್ನು ದಾಟಿ ಒಂದು ಹೌಸಿಂಗ್ ಕಾಲೋನಿ ಪ್ರವೇಶಿಸಿತು. ನಾನು ಹತ್ತು ವರ್ಷಗಳಿಂದ ಕಾದಿದ್ದ ಆ ಕ್ಷಣ ಯಾವ ಘಳಿಗೆಯಲ್ಲಿ ಬೇಕಾದರೂ ನಿಜವಾಗಬಹುದು ಎಂಬ ಅರಿವುಂಟಾದೊಡನೆ, ನನ್ನ ಯೋಚನೆಗಳಿಂದ ಹೊರಬಂದೆ. ಎರಡು ಕಡೆಗಳಲ್ಲಿ ಮನೆಗಳು, ಅಂಗಡಿಗಳು ಹಿಂದಕ್ಕೆ ಓಡುತ್ತಿದ್ದವು. ಕ್ಷಣಗಳು ಯುಗಗಳಂತೆ ಭಾಸವಾಗುತ್ತಿತ್ತು. ಹಿಂದೆ ಓಡುವ ಪ್ರತಿಯೊಂದು ಮನೆಯ ಮುಂದೆಯೂ, ನನ್ನ ಕಣ್ಣುಗಳು ಅವಳನ್ನು ಹುಡುಕಲು ಪ್ರಾರಂಭಿಸಿದವು. ಆದರೆ ಇಂದು, ಸ್ನೇಹ ನನ್ನ ಎದುರು ಬಂದು ನಿಂತರೂ, ನಾನು ಗುರುತು ಹಿಡಿಯಲಾರದಷ್ಟು ಬದಲಾಗಿರುತ್ತಾಳೆ-ಎಂಬ ವಿಚಾರ ತಲೆಯೊಳಗೆ ಬಂದ ಕೂಡಲೆ ಒಮ್ಮೆ ನನ್ನೊಳಗೆ ನಕ್ಕು, ಅಲ್ಲೆ ಒರಗಿ ಕುಳಿತೆ. ಆಟೋ ಒಮ್ಮೆಯೆ ಧಸಕ್ಕನೆ ಒಂದು ಮನೆಯ ಮುಂದೆ ನಿಂತಿತು. ಕಡೆಗೂ ನನ್ನ ಹತ್ತು ವರ್ಷಗಳ ತಪಸ್ಸು ಸಾಕಾರಗೊಳ್ಳುವುದರಲ್ಲಿತ್ತು. ಸ್ವಲ್ಪ ಚಡಪಡಿಕೆಯಿಂದಲೆ ಮನೆಯ ಕರೆಘಮ್ಟೆ ಒತ್ತಿದೆ. ಯಾರೋ ಅಪರಿಚಿತರು ಬಾಗಿಲು ತೆರೆದು, ಸ್ನೇಹಳ ಪರಿವಾರ ಒಂದು ತಿಂಗಳ ಹಿಂದೆ ಮನೆ ಬದಲಾಯಿಸಿದ ವಿಷಯ ತಿಳಿಸಿದರು. ಒಂದು ಕ್ಷಣ ಷಾಕ್ ಆದರೂ ಸಾವರಿಸಿಕೊಂಡು, ಅವರ ಬಳಿ ಒಂದು ಲೋಟ ನೀರು ಕೇಳಿ, ಅಲ್ಲೆ ಕಮ್ಬಕ್ಕೆ ಒರಗಿ ನಿಂತೆ. ದೂರದಲ್ಲಿ ಯಾರೋ ಹಾಡುತ್ತಿದ್ದರು.
'ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ,
ಹೂಡಿ ಬರದಿರು ಮತ್ತೆ ಹಳೆಯ ನೆನಪೇ'.....
Nitin R Kidiyoor
1 comment:
hmmmm....
good one..
kalpane kalpane yage uliyithu
Post a Comment